ನಾನು ಇಷ್ಟು ವರ್ಷಗಳಿಂದ ನನ್ನ ಲೇಖನಗಳನ್ನು ಆಂಗ್ಲ ಭಾಷೆಯಲ್ಲಿ ಬರೆದು ಈ ಬ್ಲಾಗಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಆದರೆ ಒ೦ದು ಬಾರಿಯೂ ಕನ್ನಡದಲ್ಲಿ ಯಾವ ಲೇಖನವೂ ಬರೆದಿಲ್ಲವಲ್ಲ ಎ೦ದು ಮೊನ್ನೆ ನನಗೆ ವಿಷಾದವಾಯಿತು. ಕನ್ನಡದ ಬಗ್ಗೆ ನಮ್ಮಲ್ಲಿ ಇಷ್ಟೋ೦ದು ಉದಾಸೀನತೆ ಏಕೆ ಬ೦ದಿದೆ ಎ೦ದು ಬೇಜಾರಾಯಿತು. ಕೆಲವೊಮ್ಮೆ ಕನ್ನಡ ಪದಗಳು ಗೊತ್ತಾಗದೆ ಗೂಗಲ್ ಟ್ರಾನ್ಸ್ಲೇಟ್ ನಲ್ಲಿ ನೋಡಿ ಬರೆಯಬೇಕಾದ ಪರಿಸ್ಥಿಥಿ ಕೊಡಾ ಬ೦ತು.
ಕಳೆದ ವರ್ಷ ನಾನು ಕೆಲವು ಆಂಗ್ಲ ಭಾಷೆಯ ನಾಟಕಗಳನ್ನು ಚೆನ್ನೈ ನಗರದಲ್ಲಿ ನೋಡಿ ಮೆಚ್ಚಿದ್ದೆ . ರಂಗ ಶಂಕರದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಕೇಳಿದ್ದೆ , ಆದರೆ ಹೋಗಲಿಕ್ಕೆ ಸಮಯ ಕೂಡಿ ಬರಲಿಲ್ಲ . ಅದೃಷ್ಟ ಎಂದರೆ ಹೀಗೇ ನೋಡಿ. ಕನ್ನಡ ರಾಜ್ಯೋತ್ಸವದ ದಿನ ಒಂದು ಕನ್ನಡ ನಾಟಕವನ್ನು ನೋಡುವ ಸದವಕಾಶ ಒದಗಿ ಬಂತು . ಇಬ್ಬರು ಸ್ನೇಹಿತರನ್ನು ಎಳೆದುಕೊಂಡು ಮಧ್ಯಾನದ ಮೂರುವರೆ ಆಟವನ್ನು ನೋಡಲು ಜಯನಗರದಲ್ಲಿರುವ ರಂಗ ಶಂಕರಕ್ಕೆ ಹೋದೆ .
ನಾವು ಅಲ್ಲಿದ್ದ ಕಲಾ ರಸಿಕರಂತೆ ನಾಟಕಗಳ ಬಗ್ಗೆ ಹೆಚ್ಚು ತಿಳಿದವರಾಗಿರಲಿಲ್ಲ. ಆದರೆ ನಾಟಕದ ಸಾರಾಂಶ ನನಗೆ ಹಾಗು ನನ್ನ ಸ್ನೇಹಿತರಿಗೆ ತುಂಬಾ ವಿಚಿತ್ರ ಹಾಗು ವಿಶಿಷ್ಟ ಎಂದೆನಿಸಿತು. ಹೀಗೆ ಒಮ್ಮೆ ನೋಡಿಕೊಂಡು ಬರೋಣ ಎಂದು ಹೋದೆವು.
ನಾಟಕವು ನಮ್ಮನ್ನು ಮೊದಲನೇ ದೃಷ್ಯದಿಂದಲೇ ಆಶ್ಚರ್ಯಗೊಳಿಸಿತು. ಯಕ್ಷಗಾನದ ಒಬ್ಬ ಕಲಾವಿದ ಬ್ಲೌಸ್ ಅನ್ನು ಹಾಕಿಕೊಳ್ಳುವ ದೃಶ್ಯವಾಗಿತ್ತು ಅದು .ನಾವೆಲ್ಲ ಈ ದ್ರಷ್ಯವನ್ನು ನೋಡಿ ಸ್ವಲ್ಪ ಗುಸುಗುಸು ಎಂದು ಮಾತಾಡುತ್ತ ಮುಖ ಮುಖ ನೋಡಿಕೊಂಡೆವು . ಕೆಲವರು ಇದನ್ನು ಸ್ವಲ್ಪ ಅಸಭ್ಯ ಎಂದು ಅಂದುಕೊಂಡಿರುವ ಸಾಧ್ಯತೆಯೂ ಇದ್ದೀತು .
ಯಕ್ಷಗಾನವು , ಮಂಗಳೂರಿನ ಕಡೆಯ ಕಲೆ . ಇದರಲ್ಲಿ ರಾಮಾಯಣ ಮಹಾಭಾರತ ಹಾಗು ಇತರೆ ಕಥೆಗಳನ್ನು ನಟರು ತಮ್ಮ ಅನನ್ಯ ಶೈಲಿಯಲ್ಲಿ ನಟಿಸುತ್ತಾರೆ . ಈ ಕಲೆಯಲ್ಲಿ ಉಪಯೋಗಿಸವ ಭಾಷಾ ಶೈಲಿ, ನಟರ ಅಲಂಕಾರದ ಹಾಗು ಹಿನ್ನೆಲೆ ಸಂಗೀತ ಎಲ್ಲವು ಅತಿ ಸುಂದರ . ಆದರೆ ಈ ಕಲೆಯು ಗಂಡಸರ ಪ್ರವೃತ್ತಿ . ಹೆಂಗಸರ ಯಕ್ಷಗಾನ ಸಭೆಯೇ ಬೇರೆ ಜಾಗದಲ್ಲಿ ನಡೆಯುತ್ತದೆ ಎಂದು ನನ್ನ ಸ್ನೇಹಿತರು ಹೇಳಿದರು ( ಅವರಿಬ್ಬರೂ ಮಂಗಳೂರಿನ ಕಡೆಯವರು ) .
ಈ ನಟ ಸೀರೆ ಉಟ್ಟು ಸಿದ್ದನಾದ ನಂತರ ಒಬ್ಬಾಕೆ ಬಂದು – ” ನಾನು ದುಶ್ಯಾಸನನ ಪಾತ್ರ ಮಾಡಲು ಗುರುಗಳು ಕಳಿಸಿದ್ದಾರೆ ಎಂದಾಗ ಈತನಿಗೆ ತೀವ್ರವಾದ ಕೋಪ ಬಂದು , ಗಂಡಸರ ಪ್ರವ್ರಿತ್ತಿಯನ್ನು ಈ ಹೆಂಗಸು ಹೇಗೆ ಮಾಡಿಯಾಳು ಎಂಬ ಕಡೆಗಾಣಿಕೆಯ ಮಾತುಗಳನ್ನಾಡಿ ಎಲ್ಲ ವೇಷ ಭೂಷಣಗಳನ್ನು ಕಿತ್ತು ಹಾಕಿ ಹೊರಟು ಹೋದನು .
ಮುಂದಿನ ದೃಶ್ಯದಲ್ಲಿ ಮತ್ತೊಮ್ಮೆ ಈ ನವ ಕಲಾವಿದೆ ಹಾಗು ಹಳೆಯ ಕಳವಿದರಿಬ್ಬರು ಆಟದ ಮೊದಲು ಸಿಧ್ಧತೆ ಮಾಡುತ್ತಾ ಇರುವಾಗ ವಾದಿಸಲು ಶುರು ಮಾಡಿದರು . ಈ ಕಲಾವಿದೆಯ ಹಿಂದಿನ ಕಾರ್ಯಕ್ರಮವನ್ನು ನೋಡಿ ಪ್ರೇಕ್ಷಕರೆಲ್ಲ ಹೊಗಳಿದ್ದನ್ನು ಕೇಳಿ ಈತನಲ್ಲಿ ಸ್ವಲ್ಪ ಅಸೂಯೆಯ ಲಕ್ಷಣಗಳು ಅವನ ಮುಖದಲ್ಲಿ ಕಂಡು ಬರುತ್ತಿತು . ಆದರೂ, ಇವನು ಅವಳ ಯಶಸನ್ನು ಸಂಪ್ರದಾಯಕ್ಕೆ ವಿರೋಧವದದ್ದೆಂದು ಹೇಳಿ ತಳ್ಳಿ ಹಾಕಿದನು. ಈ ಕಲಾವಿದೆ, ತನ್ನ ಕಾರ್ಯಕ್ರಮದ ಬಗ್ಗೆ ಪತ್ರಿಕೆಯಲ್ಲಿ ಬಂದ ಲೇಖನವನ್ನು ಓದಲು ಹೋದಾಗ – ” ಸಾಕು ಮಾಡಿ ” ಎಂದು ಹೇಳಿ ನಿಲ್ಲಿಸಿದನು.
ಇದಾದ ನಂತರ ಉಳಿದೆಲ್ಲ ದೃಶ್ಯಗಳಲ್ಲೂ ಈ ನಟಿಯ ವಾದ ವಿವಾದಗಳು ಗಟ್ಟಿಯಾಗುತ್ತಾ ಹೊದವು. ರಂಗಸ್ಥಳದಲ್ಲಿ ಹೆಣ್ಣು ಪಾತ್ರಗಳಲ್ಲಿ ಗಂಡಸರನ್ನು ಒಪ್ಪುವ ಹಾಗೆ , ಗಂಡು ಪಾತ್ರಗಳಲ್ಲಿ ಹೆಂಗಸರನ್ನೂ ಒಪ್ಪಬೇಕು ಎಂಬ ಮಾತನ್ನು ಹೇಳಿದಳು . ನಟಿಯು ತನ್ನ ಅಭಿನಯದಲ್ಲಿ ಮಹಾಭಾರತದ ಪಾಂಚಾಲಿಯ ಬಗ್ಗೆ ಹಾಗು ಪಾಂಡವರ ಧರ್ಮನಿಷ್ಟೆಯ ಬಗ್ಗೆಯೂ ಕೆಲವು ತೀಕ್ಷ್ಣ ಮಾತುಗಳನ್ನಾಡಿದಳು . ಇದರಿಂದ ಮತ್ತಷ್ಟು ಖಟು ವಾದಗಳಾದವು . ಕೊನೆಗೆ ವಾದವನ್ನು ಕಲೆಯ ಮೂಲಕವೇ ಮಾಡೋಣವೆಂದು ನಟಿ ಸವಾಲನ್ನು ಒಡ್ಡಿದಳು .
ತನ್ನ ಅದ್ಭುತ ಪಾತ್ರನಿಷ್ಟೆಯಿಂದ ಹಾಗು ಅಭಿನಯದಿಂದ ನಟನ ಸೋಕ್ಕನ್ನು ಮುರಿದಳು . ಯಕ್ಷಗಾನದಲ್ಲಿ ಹೆಂಗಸರು ಕೂಡ ನಟಿಸುವ ಹಕ್ಕಿದೆ ಎಂದು ನಟ ಸೂಕ್ಷ್ಮವಾಗಿ ಒಪ್ಪಿಕೊಳ್ಳುವ ಮೂಲಕ ನಾಟಕವು ಮುಗಿಯಿತು .